ಮುಖ ಕಾಣಲು
ಮನೆಯ ಕನ್ನಡಿಯ ಎದುರು ನಿಂತರೆ
ನನ್ನ ಮುಖ
ಮತ್ತು ಬರೀ ವಸ್ತುಗಳೇ
ನಾನು ಒಂಟಿ
ಬೇಸಿಗೆಯ ತೊರೆದು ಹಾರಿ ಹೋದ ಹಕ್ಕಿಗಳು
ಮಳೆಗಾಲಕ್ಕೆ ಮತ್ತೆ ಬಂದಂತೆ ನೆನಪುಗಳು
ಚಳಿಗಾಲದ ಹಿಮಕೊರತೆಗಳ
ಅ ಊರು ಈ ಕೇರಿ
ನಡು ನಡುವೆ ಮಣ್ಣ ಹೊತ್ತು ಹರಿವ ಹಳ್ಳ ಕೊಳ್ಳಗಳು
ಬಾಲ್ಯದಲಿ ಪಕ್ಕದ ಮನೆ ಹುಡುಗನಿಂದ ಕಡ ತಂದ
ಆ ಕಾಲದ ರುಪಾಯಿ ನಾಣ್ಯಕ್ಕಿಂತ ದೊಡ್ಡದಾದ ಕನ್ನಡಿ
ಕಣ್ಣ ಕಂಡಾಗ ಗಲ್ಲದ ಚಿಂತೆ
ಗಲ್ಲ ಕಂಡಾಗ ಹುಬ್ಬಿನ ಚಿಂತೆ
ಕೆನ್ನೆಗಿಟ್ಟ ದೃಷ್ಟಿಬೊಟ್ಟಿನ ಚಿಂತೆ
ಮನವೆಲ್ಲ್ಲಾ ಚಿಂತೆಯ ಸಂತೆ
ಅಲ್ಲಿಂದಿಲ್ಲಿಗೆ
ಇಲ್ಲಿಂದಲ್ಲಿಗೆ
ಜಿಗಿದ ಬಿಂಬಗಳು
ತಲುಪಿದ್ದು ನನ್ನ ಪೂರ್ಣ ಚಿತ್ರ ಅಲ್ಲವಾದರೂ
ಆಳದ ಹುಡುಕಾಟ
ಸೋಜಿಗವೋ ಬಲು ಸೋಜಿಗವೋ
ಬಯಲ ಹೊಲದೊಳಗೆ
ರಾಗಿ, ಜೋಳ , ಅವರೆ, ಹುಚ್ಚೆಳ್ಳು ಕೆಂಬಾರೆ ಭತ್ತ
ಬೀಸುವ ಗಾಳಿಗೆ ತೆನೆಗಳಂತೆ ಅಲುಗುವ
ಘನಸಾರ ಫಲ ತುಂಬಿದ
ಬಾವಿ ಕೆರೆ ಕಟ್ಟೆಗಳು
ಎಮ್ಮೆ, , ಮೇಕೆ ಕುರಿ ಕಾಯುವಾಗ
ಬಾಯಾರಿ ದಣಿವಾಗಿ ದಾಹಕೆ
ಬಾವಿ, ಕೆರೆ-ಕಟ್ಟೆಯತ್ತ ಬಾಗಿದಾಗ
ತಟ್ಟನೆ ಹಾರಿ ಹೋದ ಹಕ್ಕಿಗಳ ಹಿಂಡು
ಗಡ ಗಡನೆ ನಡುಗಿ ಮಿನಗುವ ಸೂರ್ಯ
ಒಳಗೆ ಮೂಡಿದ ಬಿಂಬ ಯಾರದು?
ನನ್ನ ನಂಬಿಕೆಯ ಚಹರೆಗಳೇ?
ಬಿಂಬದ ಎಡ ಬಲಕೆ
ಆಕಾಶದೆತ್ತರ ನಿಂತ ಮರಗಿಡ ಬಳ್ಳಿ
ನೆಲದಾಳಕ್ಕಿಳಿದ ಬೆಟ್ಟ ಗುಡ್ಡ ಗಿರಿ ಪರ್ವತ
ಕಳೆದು ಹೋಗಿದ್ದ ಹಸು ಹೋರಿಯ
ಹುಡುಕುವ ಬೆಳದಿಂಗಳಲ್ಲೀ
ಆ ಚಂದ್ರಮನೂ ಬಿದ್ದಿದ್ದ
ನಾನು ಬಿದ್ದು ಮೇಲೆದ್ದು. . .
ಬಯಲ ಕನ್ನಡಿಯೇ ಹಾಗೆ
ಅದರೊಳು ಸದಾ ಚಲನೆ
ಉಕ್ಕಿ ಹರಿವ ಜೀವ ಚೈತನ್ಯ
ಈಗ
ಮುಖ ಕಾಣಲು
ಮನೆಯ ಕನ್ನಡಿಯೆದುರು ನಿಂತರೆ
ನನ್ನ ಮುಖ. ಮತ್ತು ಬರೀ ವಸ್ತುಗಳೇ
ನಾನು ಒಂಟಿ
ಒಬ್ಬಂಟಿ…
- ನಾಗತಿಹಳ್ಳಿ ರಮೇಶ