ಆದಿಯ ಎದೆಯೊಳಗೆ ಬಿದ್ದ
ಅನಾದಿ ಪ್ರೀತಿಯ ಬೀಜ ಅಸ್ಫೋಟಿಸಿ
ಆದಿ ಮೂಲ ಶಿವನೊಳಗೆ ಲೀನವಾಗಿ ಗಂಗೆಯಾಗಿ ನೆಲಕ್ಕಿಳಿದು…
ಗೌರಿಯ ಜಗದ ನಡಿಗೆಯಾಗಿ ಪ್ರೀತಿ
ಪ್ರೇಮ ಮೂಲ ಕೃಷ್ಣನೊಳಗೆ ರಾಧೇ ಕೊಳಲ ನಾದ,
ಅದು ಅವನ ಹೃದಯ ಸದ್ದಿನ ನವಿಲ ನೃತ್ಯ
ಲೋಕಪಾಲ ವಿಷ್ಣುವಿನೊಳಗೆ ನಾಭಿಯಿಂದರಳಿದ ಕಮಲ ಮುಖ
ಸರ್ವವರದೇ ಲಕ್ಷ್ಮಿಯ ಸಖ
ಗರುಡನಾಗಿ ನಭಕ್ಕೆ ನೆಗೆದ ನವಿರು ನಖ
ಸೃಷ್ಟಿಪಾಲ ಬ್ರಹ್ಮನಲಿ ಕಲೆಯ ಸೃಷ್ಟಿಯ ಬೀಜ ಸರಸ್ವತಿಯಾಗಿ ಅಂಕುರಿಸಿದ ಪ್ರೀತಿ
ಮೋಡದೊಳಗೆ ಮಿಂಚು ಗುಡುಗು ಸಿಡಿಲಾಗಿ…
ಒಣ ನೆಲದಲ್ಲಿ ಬಿದ್ದ ತುಂತುರು ಸೋನೆ ಮಳೆ
ಮಳೆಯ ನಿರ್ಮಲ ಜಲದಿ ಮುಖ ತೊಳೆದ ಇಳೆ!
ಹಬ್ಬಿವೆ ವಸಂತಗಳು ಪ್ರೀತಿಯ ಸದ್ದಿನ ನೆರಳಾಗಿ
ಬೆಂದ ನೆಲದ ಮೇಲೆ, ತಾಪದಿ ನೊಂದ ಹೃದಯಗಳ ಮೇಲೆ
ನಡೆದಿವೆ ಪ್ರೇಮದ ನವಿರು ಪಾದ

ಆದಿ ಕವಿಗಳ ಎದೆಯ ಅನಾದಿ ಹಾಲು
ಸಾಹಿತ್ಯ ಸರೋವರ ದಡದ ಸಾಲು
ಕಾಳಿದಾಸನ ನಾಲಿಗೆಯಲಿ ನವಿಲುಗರಿ ಸೃಜಿಸಿದ ಕಾಳಿ
ಶಾಕುಂತಲಾ ದುಷ್ಯಂತರಾಗಿ
ಕಳೆದು ಮರಳಿದ ಉಂಗುರವಾಗಿ ಮಿನುಗಿದ ಪ್ರೇಮ.
ಬೇಂದ್ರೆಯಜ್ಜನ ‘ಸಖಿ ಗೀತ’, ಕುವೆಂಪು ಮಡಿಲಿನ ‘ಪ್ರೇಮ ಕಾಶ್ಮೀರ’,
ಶಿವರುದ್ರಪ್ಪನವರ ಕಂಡೂ ‘ಕಾಣದ ಕಡಲು’
ನರಸಿಂಹಸ್ವಾಮಿಯವರ ಮಲ್ಲಿಗೆಗಂಧದೊಡಲು!
ಪ್ರೀತಿ ಪ್ರೇಮ… ಪ್ರೀತಿ ಪ್ರೇಮ…
ಪ್ರೇಮದುದ್ಯಾನದ ತೊಟ್ಟಿಲಲಿ ರೂಮಿ ತೂಗಿದ ಕೂಸು
ಖಲೀಲ್ ಗೀಬ್ರಾನನು ಹಾಡಿದ ಪ್ರೇಮದ ಲಾಲಿ!
ಟಾಲ್ ಸ್ಟಾಯ್ ತನಗೆ ತಾನೇ ತೂಗಿಕೊಂಡು ಮಲಗಿದ
ಪಶ್ಚಾತ್ತಾಪದ ಉಯ್ಯಾಲೆಯ ಬೆಳಕು!
ಅಂಗುಲಿಮಾಲನು ತನ್ನೆದೆಗೆ ತಾನೇ ನೆಟ್ಟುಕೊಂಡ
ಬುದ್ಧನ ಅರಿವಿನ ಪ್ರೇಮದ ಬಾಣ
ಪ್ರೀತಿ ಪ್ರೇಮ ಸಮತೆ ಕಾರುಣ್ಯಗಳೆಂಬ
ಹೂವುಗಳೊಳಗಿನಿಂದ ಅರಳಿದರು
ಬುದ್ಧ, ಮಹಾವೀರ, ಪೈಗಂಬರ್, ಕ್ರಿಸ್ತ,
ಬಸವಣ್ಣ, ಗುರುನಾನಕರು….
ಜೀವನಾಡಿಗಳಾಗಿ ತಬ್ಬಿದರು ಜಗವ
ಕೋಟಿ ಪಾಪಗಳು ನಾಶವಾಗುವ
ಪವಿತ್ರ ಪ್ರೀತಿಯ ಜೀವಜಲವಾಗಿ
ಸಂತ ಕಬೀರ, ಷರೀಫ ದಾಸಾನುದಾಸರು
ಪ್ರೀತಿ, ಪ್ರೇಮಗಳ ಹಂಚಿದರು ತಮ್ಮ ಜೋಳಿಗೆಯಲಿ
ಸಕಲ ಚರಾಚರಗಳ ಮೈನವಿರು
ಬಾಡಿ ಒಣಗಿ ಮತ್ತೆ ಚಿಗುರುವ ಉಸಿರು
ಬೇಲಿಯ ಮೇಲಿನ ಹೂವು
ತೊಟ್ಟಿಲ ಮಗುವಿನ ನಗುವು
ಕಾಡೊಳಗೆ ಮೃಗ ಖಗಗಳ
ಧ್ವನಿಯಾಗಿ ಘರ್ಜಿಸಿದೆ ಪ್ರೀತಿ!
ಪ್ರೀತಿಯ ಹೂವು ಚಿಟ್ಟೆಯ ರೆಕ್ಕೆ ಧರಿಸಿ
ಹಾರಿ ಹಾರಿ ಮೇಲೆ ಹಾರಿ
ಹಾರಿ ಹಾರಿ ಮೇಲೆ… ಮೇಲೆ ಹಾರಿ
ಅನಾದಿ ಆದಿಯ ಬಳಿಗೆ, ಆದಿ ಶಕ್ತಿ ಪರಾ ಶಕ್ತಿಯ ಮಡಿಲಿಗೆ
ಹಾರಿದೆ ಪ್ರೀತಿ ಅವರ ಒಡಲಿಗೆ
ಪ್ರೀತಿ ಕುಣಿದಿದೆ ಕೋಟ್ಯಾನು ಕೋಟಿ ಕಾಲುಗಳ ಹೊತ್ತು,
ಕೋಟ್ಯಾಂತರ ಕೋಟಿ ಕಣ್ಣುಗಳ ಅರಳಿಸಿ,
ಆದರೆ ಅದು ಒಂದೇ ಹೃದಯ
ಏನೀ ಮಾಯೆ, ಪ್ರೀತಿಯ ಸೋನೆ!
ನಾಗರಿಕತೆಯ ನದಿ, ಇತಿಹಾಸದ ಹೊಳೆ
ತೊಯ್ದಿದೆ ಊರುಕೇರಿಯ ಹಾದಿ ಬೀದಿಗಳನು
ಪ್ರೀತಿಯ ನೆನಪುಗಳನು ತೇಲಿಸಿಕೊಂಡು!
ನೆಲಮರವೊಂದು ಬೆಸೆದಿದೆ
ಪ್ರೀತಿ ಎಂಬ ಹೃದಯಕ್ಕೆ ಬಳ್ಳಿಯಾಗಿ…
ಹಬ್ಬಿದೆ ಜಗದಗಲ
ಗಡಿ, ಭಾಷೆ, ಧರ್ಮ, ಕುಲ, ಜಾತಿ ವಿಜಾತಿಗಳನೆಲ್ಲ ಮೀರಿ
ಜನ ಜೀವನ ಬೆಳಗುತ , ಪ್ರೇಮಕಾಂತಿಯ ದೀಪ್ತಿಯಾಗಿ…
ಹರಿಯುತ್ತಲೇ ಇದೆ ಪ್ರೀತಿ ಪ್ರೇಮದೊಡನಾಡಿಯಾಗಿ
ಆದಿಯಿಂದ ಅನಂತತೆಯೆಡೆಗೆ ಲೀಲಾಮೃತವಾಗಿ
_ ನಾಗತಿಹಳ್ಳಿ ರಮೇಶ್