ಹೊಸತು ವರುಷಕೊಂದು ಹೊಸತು ಕಾವ್ಯ ಕಾಣಿಕೆ: ಮಂಜುನಾಥ ಲತಾ

ನಮ್ಮೊಳಗಿನ ಮಗುವ ನಗುವ ಮುಗ್ಧತೆ
ಕುತೂಹಲ, ಬೆರಗು, ಸೊಬಗು, ಸೌಂದರ್ಯವ
ಎಂದು ಕಳೆದುಕೊಂಡೆವೋ
ಅಂದಿನಿಂದ ನಾವು ಸಾಯುತ್ತಿರುವ ಮನುಷ್ಯರು!
ಆ ನಗು ಮುಗ್ಧತೆ ಬೆರಗು ಸೌಂದರ್ಯ
ಕಣ್ಣ ಕುತೂಹಲಗಳೊಳಗೆ
ಆ ದಿವ್ಯ ಬೆಳಕಿನ ಕುಡಿ ಇದೆ!
ಅದನ್ನೀಗ ನಮ್ಮೊಳಗೆ ಹೊತ್ತಿಸಿಕೊಳ್ಳಬೇಕು!

ನಾಗರಿಕತೆ
ಎಲ್ಲದಕ್ಕೂ ಹತ್ತಿರವಾಗುವುದರಿಂದ ಆರಂಭ.
ನಂಬಿಕೆ ನಾಶವಾದ ದಿನ
ನಾಗರಿಕತೆಯೊಂದು ಸೂತ್ರ ಹರಿದ ಗಾಳಿಪಟ
ಸುಳಿಗೆ ಸಿಲುಕಿ ಆಳ ಪ್ರಪಾತ ಕಣಿವೆಗಳ
ಒಡಲಲ್ಲಿ ಮಾಯವಾಗುವುದು.
-ಇಂತಹ ಮನ ಮುಟ್ಟುವ ನೂರಾರು ಸಾಲುಗಳನ್ನು ಹೊತ್ತ ನಾಗತಿಹಳ್ಳಿ ರಮೇಶ ಅವರ ‘ಬಯಲ ಕನ್ನಡಿ ಮತ್ತು ಮನದ ಮಿಂಚು’ ಕವನ ಸಂಕಲನ ಕನ್ನಡ ಕಾವ್ಯ ಜಗತ್ತಿಗೆ ಹೊಸ ವರ್ಷದ ಹೊಸ ಕಾಣಿಕೆ.

ಎಂದು ನಮ್ಮೊಳಗಿನ ಮಗುವ ನಗುವ ಮುಗ್ಧತೆ
ಕುತೂಹಲ, ಬೆರಗು, ಸೊಬಗು, ಸೌಂದರ್ಯವ
ಕಳೆದುಕೊಂಡೆವೋ
ಅಂದಿನಿಂದ ನಾವು ಸಾಯುತ್ತಿರುವ ಮನುಷ್ಯರು!
-ಎನ್ನುವ ಸಾಲುಗಳು ನಾವು ಕಳೆದುಕೊಳ್ಳುತ್ತಿರುವ ‘ಮಗುತನದ ಪರಿಣಾಮ ನಮ್ಮದು ಸಾವಿನೆಡೆಗೆ ಹೆಜ್ಜೆ ಎಂಬ ಎಚ್ಚರಿಕೆಯನ್ನು ನೀಡುತ್ತಿವೆ. ಆದರೆ

ನಗು ಮುಗ್ಧತೆ ಬೆರಗು ಸೌಂದರ್ಯ
ಕಣ್ಣ ಕುತೂಹಲಗಳೊಳಗೆ
ಆ ದಿವ್ಯ ಬೆಳಕಿನ ಕುಡಿ ಇದೆ!
ಅದನ್ನೀಗ ನಮ್ಮೊಳಗೆ ಹೊತ್ತಿಸಿಕೊಳ್ಳಬೇಕು!
-ಎಂಬ ಸಾಲುಗಳು ನಾವು ಮರಳಿ ‘ಮಗುತನ’ವನ್ನು ಗಳಿಸಿಕೊಳ್ಳಬಹುದು ಎಂಬುದನ್ನು ಸೂಚಿಸುತ್ತಿವೆ.

ನಾಗರಿಕತೆ
ಎಲ್ಲದಕ್ಕೂ ಹತ್ತಿರವಾಗುವುದರಿಂದ
ಆರಂಭ
-ಈ ಸಾಲುಗಳು ನಿಜವಾದ ನಾಗರಿಕ ಮನುಷ್ಯನ ‘ಕೂಡುಬಾಳ್ವೆಯ ಮಹತ್ವವನ್ನು ಹೇಳುತ್ತವೆ. ಎಲ್ಲರಿಗೂ, ಎಲ್ಲವಕ್ಕೂ ಹತ್ತಿರವಾಗುವುದು ನಿಜವಾದ ನಾಗರಿಕತೆ ಎಂಬುದನ್ನು ಈ ಸಾಲುಗಳು ಉಸುರುತ್ತವೆ. ಈ ನಾಲ್ಕು ಪದಗಳ ಒಟ್ಟಾರೆ ಆಶಯವೇ ಈ ಸಂಕಲನದ ‘ಕೂಡೋಣ ಕಟ್ಟೋಣ ಬಾಳೋಣ ಬೆಳಗೋಣ’ ಎಂಬ ಧ್ಯೇಯ ಸಾಲುಗಳಾಗಿವೆ.

ಹಾಗೆಂದು ರಮೇಶ್ ಅವರು ಕೇವಲ ಒಳಿತನ್ನೇ ಧ್ಯಾನಿಸುವ, ಆಶಿಸುವ ಭಾವುಕ ಕವಿಯಲ್ಲ. ಸಮಾಜದ ಸುತ್ತಲಿನ ಅನ್ಯಾಯ, ಕಪಟ, ಅಂತರಂಗ-ಬಹಿರಂಗಗಳ ನಡುವಿನ ಸಂಘರ್ಷಗಳನ್ನು, ಕಾರಣವೇ ಇಲ್ಲದೆ ಕುಸಿದು ಬೀಳುವ ಮನುಷ್ಯನ ನೈತಿಕತೆಯನ್ನು, ನೀಚತನವನ್ನು ಹತ್ತಿರದಿಂದ ಬಲ್ಲವ ಅವರು ಅವೆಲ್ಲಕ್ಕೂ ತಮ್ಮ ಕಾವ್ಯದ ಕನ್ನಡಿಯನ್ನು ಒಡ್ಡುತ್ತಾರೆ. ಹಾಗಾಗಿಯೇ ಅವರ ಕಾವ್ಯ ಎಲ್ಲವನ್ನು ಹೊರಗೆಳೆಯುವ ‘ಬಯಲ ಕನ್ನಡಿ’. ಇದಕ್ಕೆ ಉದಾಹರಣೆಯಾಗಿ ಇಲ್ಲಿನ ಹಲವಾರು ಕವಿತೆಗಳ ಸಾಲುಗಳನ್ನು ಗಮನಿಸಬಹುದು:

ಈ ಜಾತ್ರೆಯ ನಡುವೆ
ಹೊಟ್ಟೆಗಿಲ್ಲದ ಬಟ್ಟೆಗಿಲ್ಲದ ಜನ
ಇನ್ನು ಮಲಗಲು ತಾವೆಲ್ಲಿ?
ಬೇಗುದಿಯಲಿ ಬೆಂದವರ ಕಣ್ಣೀರಲ್ಲೇ
ಬಣ್ಣದೋಕುಳಿಯ
ಜಲಕ್ರೀಡೆಯಾಡುವ ಆಸೆ
ಮನೆಯಲಿ ಕುದಿವ ಎಣ್ಣೆಗೆ ಹಾಕಿದ
ಒಗ್ಗರಣೆ ಸಾಸಿವೆ ಚಟಪಟನೆ
ತೆರೆದ ಕಣ್ಣಿಗೆ ಸಿಡಿಯಿತು!
-ಎಂಬಲ್ಲಿ ಶೋಷಕರು-ಶೋಷಿತರು ಮರೆಯಲ್ಲಿಯೇ ಮೋಸವೆಸಗುವ ಕ್ರಿಯೆಯನ್ನು ರಮೇಶ್ ಅವರು ವಿವರಿಸುತ್ತಾರೆ. ಕಾಣದ ಕೈಗಳು ಹೊಟ್ಟೆಗಿಲ್ಲದ, ಬಟ್ಟೆಗಿಲ್ಲದ ಜನರನ್ನು ಮರೆಮೋಸದಲ್ಲಿ ವಂಚಿಸುವ ಪರಿ ಇದು. ಪ್ರಕೃತಿಯನ್ನು ಇನ್ನಿಲ್ಲದಷ್ಟು ಹಾಳುಗೆಡವುವ, ಪ್ರಕೃತಿಯ ಮೇಲೆ ಮತ್ತೆ ಮತ್ತೆ ಅನ್ಯಾಯವೆಸಗುವ ಮನುಷ್ಯನ ಕ್ರೂರತನ, ಕುರುಡುತನವನ್ನು ಕಂಡು ಕನಲುವ ಪರಿ ಈ ಸಾಲುಗಳಲ್ಲಿದೆ:

ಕಡಲ ತಾಯಿ ಮುಕ್ಕಳಿಸಿದ ಉಗಿತಕ್ಕೆ
ಮುಳುಗಿದವು ನಗರ ಪಟ್ಟಣಗಳು,
ಹಸಿದ ಹೊಟ್ಟೆಪೊಟ್ಟಣಗಳು
ಮೈಕೈಗೆ ಸಿಕ್ಕ ಎಲ್ಲ ಎಲ್ಲವೂ
ಮನುಷ್ಯರು ‘ಸುನಾಮಿ’ ಎಂದೊಂದು ಸತ್ತ ಪದವಿಟ್ಟು
ತಮ್ಮ ನಿಘಂಟಿನಲ್ಲಿ ಬರೆದುಕೊಂಡರು!
ಭೂತಾಯಿಗೆ ರಕ್ತ ಹೀರುವ ಜಿಗಣೆಗಳಂತೆ
ಮೆತ್ತಿಕೊಂಡ ಮನುಜರೇ,
ಒಂದಿಷ್ಟು ಪಿಸುಮಾತುಗಳ ಆಡಲೇಬೇಕಿದೆ.

ಎತ್ತರೆತ್ತರದ ಗಾಜಿನಿಂದ ನೋಡಿದರೆ
ಸಮುದ್ರ ಸೇರುತ್ತಿರುವ ನದಿ.
ಕುಂಟಾಬಿಲ್ಲೆಯಾಡುವ ಹುಡುಗಿ
ಗೆರೆ ನೆಗೆಯಬಹುದಾದಷ್ಟು ಅಗಲದ ನದಿ
ತೆವಳುತ್ತಿದೆ ಬಳಲಿದ ಮುದುಕಿಯಂತೆ;
ಒಳಚರಂಡಿಗಳ ಕಸ, ಜನರ ಹೊಟ್ಟೆಯ ವಿಷ
ವಿಸರ್ಜನೆಗೊಳ್ಳುತ್ತಿವೆ ನದಿಯ ಬಾಯಿಗೆ.

ಕೂದಲುಂಡೆ, ಹೇಲುಂಡೆ, ಸತ್ತ ಜೀರುಂಡೆ
ತೇಲುತ್ತಿವೆ ನದಿಯ ಮೈಮೇಲೆ!

ದುಡಿದುಣ್ಣುವ ಬೀದಿ ಬದಿಯ ಜನರ ಕೇಳುವವರಾರು? ಅವರ ಬದುಕೊಂದು ಮುಳ್ಳಿನ ಮೇಲಿನ ನಿತ್ಯ ನಡಿಗೆಯ ಸೋಜಿಗ. ಇಂತಹ ಜನರನ್ನು ಕಂಡು ಕವಿಹೃದಯ ಮಿಡಿಯುತ್ತದೆ:

ಉರಿವ ಒಡಲ ಕಟ್ಟಿಕೊಂಡು
ದುಡಿಯಲಿಕ್ಕೆ ಹುಟ್ಟಿದೆವು
ಕಲ್ಲು ಮಣ್ಣಿನಲ್ಲಿ ಕರಗಿ
ನಾವು ಭೂಮಿಯಾದೆವು.
ತೋಳು ತೊಡೆಯ ಇಟ್ಟಿಗೆ ಮಾಡಿ
ಮನೆಯ ಕಟ್ಟಿದೆವು
ನೆತ್ತಿಗಿಷ್ಟು ನೆರಳಿಲ್ಲದೆ
ಬೀದಿಯಲ್ಲೇ ಉಳಿದೆವು.

ರೈತರನ್ನು ಕುರಿತ ವಿಷಾದ ಗಾಥೆ’ಯಂತಿರುವ ‘ನೋವುಂಡ ಬಿದಿರು’ ಕವಿತೆ ರೈತಬದುಕನ್ನು ಕಂಬನಿದುಂಬಿದ ಕಣ್ಣುಗಳಿಂದ ನೋಡುವಂತೆ ಮಾಡುತ್ತದೆ. ಒಣಗಿದ ಬಿದಿರಿಗೆ ರೈತನ ಒಡಲನ್ನು ಉರಿ ಬದುಕನ್ನು ವಿವರಿಸುವ ರಮೇಶ್ ಅವರ ನಿತ್ಯದ ಪಡಿಪಾಟಲನ್ನು ಹೊಸ ಹೊಸ ರೂಪಕಗಳಲ್ಲಿ ತೆರೆದಿಡುತ್ತಾರೆ:

ಮೊದಮೊದಲು ಬಿದಿರಾಗಿ ನೋವುಂಡು ಕೊಳಲಾಗಿ
ಕೊಳಲು ಕದ್ದವರ ಎದೆಯ ಹಾಡಾಗಿರುವೆವು
ನೆಲದ ಆಕಾಶದೊಳಗಿನ ಹೊಲದೊಳಗೆ
ಬೆದರು ಬೊಂಬೆಗಳಾಗಿ ಕಾಯುತ್ತ ನಿಂತಿರುವೆವು
ನಿನ್ನನೇ ತಾಯೇ…
ನಮ್ಮೆದೆಯ ಮರಗಳ ಮೇಲೆ ಹಕ್ಕಿಗಳು ಗೂಡುಗಳ ಹೂಡಿ,
ಸಂಸಾರ ಮಾಡಿಲ್ಲಿ, ಹಲವು ವಸಂತಗಳ ಸಂಭ್ರಮಿಸಿ ಹೋದವು
ಹಗಲಿರುಳು ಮಳೆ ಚಳಿ ಬಿಸಿಲೆನ್ನದೆ ಕಾಯುತ್ತಿರುವೆವು
ನಿನ್ನನೇ ತಾಯೇ…

-ನಿತ್ಯ ನೇಗಿಲ ಗೆರೆಯ ಕೊರೆಯುವ ರೈತರ ಪ್ರಾರ್ಥನೆ ಇದು.

ಒಳಿತುಗಳ ಆಶಯ, ಸಾಮಾಜಿಕ ಕಷ್ಟಗಳ ಕುರಿತ ಕಳವಳ ಇವುಗಳ ಜೊತೆಗೆ ನಾಗತಿಹಳ್ಳಿ ರಮೇಶ ಅವರ ಕವಿತೆಗಳಲ್ಲಿ ಆಧ್ಯಾತ್ಮ, ಅಂತರಂಗದ ಹುಡುಕಾಟವೂ ಇದೆ. ಆಗಾಗ್ಗೆ ಸುಳಿದು ಹೋಗುವ ‘ಮನದ ಮಿಂಚು’ ಓದುಗನಲ್ಲಿ ಹೊಸ ಉದ್ಗಾರಗಳನ್ನುಂಟು ಮಾಡುವಂತಿದೆ. ಬುದ್ಧ ತತ್ವದ ಕಾರುಣ್ಯದ ಜೊತೆಜೊತೆಗೇ ಏಕಾಂತದ ಅನುಭೂತಿಯನ್ನು ಅರಸುವ ಹಂಬಲವೂ ಇಲ್ಲಿನ ಹಲವು ಕವಿತೆಗಳಲ್ಲಿದೆ. ಅಲ್ಲಲ್ಲಿ ಮಿಂಚಿ ಹೋಗುವ ಸಾಲುಗಳು ಓದುಗನನ್ನು ಆಲೋಚನೆಗೆ ಹಚ್ಚುತ್ತವೆ. ಈ ಸಾಲುಗಳಲ್ಲಿ ಆಧ್ಯಾತ್ಮದ ಅರಸುವಿಕೆ, ಅಂತರಂಗದಲ್ಲೇ ಆಗಾಗ್ಗೆ ಲೀನವಾಗುವ ತನ್ಮಯತೆ ಕಂಡುಬರುತ್ತದೆ. ಅಂತಹ ಕೆಲವು ಸಾಲುಗಳು ಇಲ್ಲಿವೆ:

ಜಿಂಕೆಯ ಕಾಲ್ಗಳಲಿ ಹುಲಿಯ ಗುರುತು
ಮನುಜನ ಹೃದಯದಲಿ ನಾಟಿದೆ
ಪರಚಿದ ಗುರುತು.
ನಿಶೆ ಎಲ್ಲ ಹುಡುಕಾಟಗಳ ಕೇಂದ್ರ ಬಿಂದು
ಹುಡುಕಿದ್ದು ಸಹಜವಾದರೂ
ಹುಲಿ ಹುಲ್ಲೆ ಎಂಬ ಎರಡು ಪದಗಳ
ಅಕ್ಷರ ವ್ಯತ್ಯಾಸದಷ್ಷೇ ಹತ್ತಿರ ಆಧ್ಯಾತ್ಮ!
ಎಲ್ಲೋ ಬೀಸಿದ ಗಾಳಿಯು
ಇನ್ನೆಲ್ಲೋ ಹಚ್ಚಿದ
ದೀಪವ ಆರಿಸಿದರೆ
ಗಾಳಿಯ ಉಸಿರಿಗೇನು ಅರ್ಥ?

ಒಂದಾನೊಂದು ಕಾಲದಲ್ಲಿ
ಯಾತನಾ ಶಿಬಿರದಲ್ಲಿ ಮಲಗಿದ್ದೆ .
ಈಗ
ನಾ ನಡೆವ ಹಾದಿಗಳಲ್ಲೆಲ್ಲಾ
ತಂಪೆರೆವ ಝರಿಗಳ ಸಾಲು…
ಹಾಲಾಹಲವನ್ನೆಲ್ಲ ಕುಡಿದ ಶಿವ
ನಂಜುಂಡನಾಗಿಬಿಟ್ಟ
ಹಾಲನ್ನು ತಾಯಂದಿರ
ಎದೆಯೊಳಗೆ ಇಟ್ಟ!
ಕಣ್ಣೀರಿಲ್ಲದೆ
ದಿವ್ಯ ಕಾಣದು…

ಬದುಕಿನ ಒಳಿತು-ಕೆಡಕುಗಳ ಸಾರವನ್ನೆಲ್ಲ ಬಸಿದುಕೊಂಡಂತೆ ಇರುವ ಇಂತಹ ಹಲವು ಸಾಲುಗಳನ್ನು ಬರೆದಿರುವ, ಬರೆಯುತ್ತಿರುವ ನಾಗತಿಹಳ್ಳಿ ರಮೇಶ್ ಅವರಿಗೆ ಹೊಸ ವರ್ಷದ ಶುಭಾಶಯಗಳು. ಹಾಗೆಯೇ ‘ಬಯಲ ಕನ್ನಡಿ ಮತ್ತು ಮನದ ಮಿಂಚು’ ಸಂಕಲನಕ್ಕಾಗಿ ಕಾದಿರುವ ಅವರ ಕಾವ್ಯಪ್ರೇಮಿಗಳಿಗೂ ಸಮಸ್ತ ಕನ್ನಡ ಬಂಧುಗಳಿಗೂ ಹೊಸ ವರ್ಷದ ಶುಭಾಶಯಗಳು.

ನಾಗತಿಹಳ್ಳಿ ರಮೇಶ್ ಅವರ ಈ ಕವನ ಸಂಕಲನದ ಹಲವು ಕವಿತೆಗಳು ಈಗಾಗಲೇ ಹಾಡುಗಳಾಗಿ ಹಲವು ಗಾಯಕರ ಕಂಠಗಳಲ್ಲಿ ವೈವಿಧ್ಯಮಯವಾಗಿ ಹೊರಹೊಮ್ಮಿವೆ. ‘ಬಯಲ ಕನ್ನಡಿ’, ‘ಮನದ ಮಿಂಚು’, ‘ಒಳಿತು’ ಹಾಗೂ ‘ಮಳೆಕಾವು’ ಶೀರ್ಷಿಕೆಗಳಲ್ಲಿ ಸೀಡಿಗಳಾಗಿ, ಪೆನ್ ಡ್ರೈವ್ ಅಡಕಗಳಲ್ಲಿ ಸೇರಿವೆ. ಈ ಹಾಡುಗಳನ್ನು ನಾಗತಿಹಳ್ಳಿ ರಮೇಶ್ ಅವರ ಯೂ ಟ್ಯೂಬ್ ಚಾನೆಲ್ https://www.youtube.com/@nagathihalliramesh ನಲ್ಲಿ ಆಸಕ್ತರು ಕೇಳಬಹುದು.

-ಮಂಜುನಾಥ್ ಲತಾ
manjunathlatha@gmail.com

Comments

No comments yet. Why don’t you start the discussion?

Leave a Reply

Your email address will not be published. Required fields are marked *