ನಾನೊಂದು ಮರ
ನೀನೊಂದು ಮರ
ಒಂದೇ ತಾವು ನಮಗೆ
ಯಾಕೋ ಹನಿಯಾ ಸುಳಿವಿಲ್ಲ
ಮುಗಿಲೆಡೆಗೆ ನಮ್ಮ ಧ್ಯಾನ
ಯಾರೋ ಇಬ್ಬರು ಬಂದು
ನೆರಳಲಿ ಕನಸ ಕಂಡು
ಒಣಗಿದ ನೆಲವ ನೀರು ತಬ್ಬಿ
ಎಲ್ಲಾ ಕಾಡಯ್ತು
ಕಾಡೆಲ್ಲಾ ಹಾಡಾಯ್ತು
ಕತ್ತಲು ಸರಿದು ಕಣ್ಣು ತೆರೆದು
ಹುಟ್ಟಿದ ಮಗುವಿನ ಕೇಕೆ
ಮುಗಿಲು ನೆಲಕೆ ಮಳೆಯಾ ಪರದೆ
ಮಣ್ಣೇ ಪದವಾಯ್ತು
ಪದವೆಲ್ಲಾ ಬೆಳಕಾಯ್ತು
ಮುತ್ತು ಮುತ್ತಿಗೂ ಅರಳಿದೆ ಮಡಿಲು
ಬೆವರು ಮಳೆಯಾಗಿ ಸೇರಿದೆ ಕಡಲು
ತುಟಿಯಲಿ ಬೆಸೆದಾ ಆ ಕನಸು
ಚಿಪ್ಪಲಿ ಮುತ್ತಾಯ್ತು
ಮುತ್ತೆಲ್ಲಾ ಒಲವಾಯ್ತು
ನಾನೊಂದು ಮರ
ನೀನೊಂದು ಮರ
ಒಂದೇ ತಾವು ನಮಗೆ…
-ನಾಗತಿಹಳ್ಳಿ ರಮೇಶ್